ಫರ್ಮಿ, ಎನ್ರಿಕೊ
	1901-54. ನ್ಯೂಕ್ಲಿಯರ್ ಅಥವಾ ಪರಮಾಣುಯುಗವನ್ನು ಅವಾಹಿಸಿದ ಇಟಾಲಿಯನ್-ಅಮೆರಿಕನ್ ಭೌತವಿಜ್ಞಾನಿ. ಪರಮಾಣುಗಳನ್ನು ಕೃತಕವಾಗಿ ಛಿದ್ರಿಸುವುದರಲ್ಲಿ ಮಂದಗತಿಯ ನ್ಯೂಟ್ರಾನುಗಳು ಅತಿ ಯಶಸ್ವಿಯಾಗುವುವೆಂಬುದನ್ನು ಶೋಧಿಸಿದ. ನಿಯಂತ್ರಿಕ ಪರಮಾಣುವಿನ ಶೃಂಖ ಲಾಕ್ರಿಯೆಯನ್ನು ಮೊತ್ತಮೊದಲಿಗೆ ಸಾಧಿಸಿದ. ಈತ ಪ್ರಾಯೋಗಿಕ ಸಂಶೋಧನೆಗಳಲ್ಲಿ ಅಲ್ಲದೆ ಸೈದ್ಧಾಂತಿಕ ಸಂಶೋಧನೆಗಳಲ್ಲಿ ಕೂಡ ಬಹಳ ಪರಿಣತಿ ಪಡೆದಿದ್ದ. ( ಕಣಗಳ ಕ್ಷಯದ ಸಿದ್ಧಾಂತ ಮತ್ತು ಫರ್ಮೀ-ಡಿರಾಕ್ ಸಂಖ್ಯಾಕಲನಸಿದ್ಧಾಂತ ಈತನ ಇತರ ಕೊಡುಗೆಗಳು. 1901 ಸೆಪ್ಟೆಂಬರ್ 29ರಂದು ಇಟಲಿಯ ರೋಮ್ ನಗರದಲ್ಲಿ ಫರ್ಮಿಯ ಜನನ. ಶಾಲೆಯಲ್ಲಿದ್ದಾಗಲೇ ಅನೇಕ ಪ್ರಯೋಗಗಳನ್ನು ಕೂಲಂಕಷವಾಗಿ ನಡೆಸಿ ತೀಕ್ಷ್ಣಬುದ್ಧಿಯವನೆಂದು ಹೆಸರು ಪಡೆದಿದ್ದ. ಮನೆಯಲ್ಲೇ ಪ್ರಯೋಗ ಸಾಧನೆಗಳನ್ನು ರಚಿಸುತ್ತಿದ್ದುದಿತ್ತು. ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಈತ ಎಕ್ಸ್‍ಕಿರಣಗಳ ಸಂಶೋಧನೆ ಗೈಯಲು ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ತೆರಳಿ ರೀಯಾಲ್‍ಸ್ಕೌಲ್ ನಾರ್ಮಲೆ ಸುಪೀರಿಯರ್ ಎಂಬ ವಿದ್ಯಾ ಸಂಸ್ಥೆಯಿಂದ ಡಾಕ್ಟೊರೇಟ್ ಪದವಿ ಪಡೆದ. ಅಲ್ಲಿಂದ ಮುಂದೆ ಸುಪ್ರಸಿದ್ಧ ಭೌತವಿಜ್ಞಾನಿ ಮ್ಯಾಕ್ಸ್ ಬಾರ್ನ್ ಜೊತೆ ವ್ಯಾಸಂಗಿಸಲು ಜರ್ಮನಿಯ ಗಾಟೆಂಗನ್ ವಿಶ್ವವಿದ್ಯಾಲಯಕ್ಕೆ ಹೋದ. ತರುವಾಯ ಇಟಲಿಯ ಫ್ಲಾರನ್ಸ್ ವಿಶ್ವವಿದ್ಯಾಲಯಕ್ಕೆ ಗಣಿತ ವಿಜ್ಞಾನದಬೋಧಕವಾಗಿ ಹಿಂತಿರುಗಿದ. ಅಲ್ಲಿ ಈತ ಆದರ್ಶ ಅನಿಲಗಳ ಬಗ್ಗೆ ಮಾಡಿದ ಸಂಶೋಧನೆಗಳಿಂದಾಗಿ ಖ್ಯಾತಿ ಗಳಿಸಿ ರೋಮ್ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತವಿಜ್ಞಾನದ ಪೂರ್ಣ ಪ್ರಾಧ್ಯಾಪಕನಾಗಿ ನೇಮಕಗೊಂಡ. ಈ ಸಂಸ್ಥೆಗಳಲ್ಲಿ ಫರ್ಮಿ ಪ್ರತಿಭಾವಂತ ವಿದ್ಯಾರ್ಥಿಗಳ ಉತ್ಕøಷ್ಟ ತಂಡವೊಂದನ್ನು ರೂಪಿಸಿದೆ. 1925ರಲ್ಲಿ ಪೌಲಿ ಪ್ರತಿಪಾದಿಸಿದ್ದ ಬಹಿಷ್ಕರಣ ತತ್ತ್ವಕ್ಕೆ ಒಳಗಾಗುವ ಎಲೆಕ್ಟ್ರಾನುಗಳ ಸಂಖ್ಯಾ ಕಲನವಿಜ್ಞಾನವನ್ನು ಈತ 1926ರಲ್ಲಿ ನಿರೂಪಿಸಿದ.

	1928ರಲ್ಲಿ ಲಾರಾಕೇಪಾನ್ ಎಂಬಾಕೆಯೊಡನೆ ವಿವಾಹ. ಫರ್ಮಿ ದಂಪತಿಗಳಿಗೆ ಇಬ್ಬರು ಮಕ್ಕಳು. ಸರಳ ಮತ್ತು ನಿರಾಡಂಬರ ಜೀವನ ಇವರದು.

	1929ರಲ್ಲಿ ಫರ್ಮಿಯನ್ನು ಇಟಲಿಯ ರಾಯಲ್ ಅಕಾಡೆಮಿಯ ಸದಸ್ಯನಾಗಿ ಚುನಾಯಿಸಲಾಯಿತು. ಇಟಲಿಯಲ್ಲಿ ಭೌತವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಲು ಇವನು ಬಹುವಾಗಿ ಶ್ರಮಿಸಿದ. ಪ್ರಾಯೋಗಿಕ ಸಂಶೋಧನೆಗಳನ್ನು ಆರಂಭಿಸಿ ಪ್ಯಾರಾಫಿನ್ ದ್ರವದಲ್ಲಿ ಹಾಯಿಸುವುದರ ಮೂಲಕ ಮಂದಗತಿಯುಳ್ಳಂತೆ ಮಾಡಿದ ನ್ಯೂಟ್ರಾನುಗಳನ್ನು ಉಪಯೋಗಿಸಿ ಕೃತಕವಾಗಿ ವಿಕಿರಣಪಟುತ್ವವನ್ನು ಉತ್ಪತ್ತಿ ಮಾಡುವುದರಲ್ಲಿ ಸಮರ್ಥನಾದ. ನ್ಯೂಟ್ರಾನುಗಳ ಬಂಬಾಯಿಸಿಕೆಯಿಂದ ಉತ್ಪತಿಯಾಗುವ ನೂತನ ವಿಕಿರಣಪಟು ಧಾತುಗಳನ್ನು ಸರಿಯಾಗಿ ಗುರುತಿಸಿದ್ದಕ್ಕಾಗಿ ಮತ್ತು ಮಂದಗತಿಯ ನ್ಯೂಟ್ರಾನುಗಳಿಂದ ಉಂಟಾಗುವ ಪರಮಾಣುಗಳ ಪ್ರತಿಕ್ರಿಯೆಯನ್ನು ಆವಿಷ್ಕರಿಸಿದ್ದಕ್ಕಾಗಿ ಈತನಿಗೆ ಭೌತವಿಜ್ಞಾನದ 1932ರ ಸಾಲಿನ ನೊಬೆಲ್ ಪಾರಿತೋಷಿಕವನ್ನು ಕೊಡಲಾಯಿತು. ಆ ವೇಳೆಗೆ ಇಟಲಿಯಲ್ಲಿ ಫಾಸಿಸ್ಟ್ ಸರ್ಕಾರವಿತ್ತು. ಫರ್ಮಿ ಇದರ ಕಟ್ಟಾ ವಿರೋಧಿ. ಹೀಗಾಗಿ ಪಾರಿತೋಷಿಕ ಪಡೆಯಲು ಸ್ಟಾಕ್‍ಹೋಮಿಗೆ ಹೋಗಿದ್ದ ಈ ಕುಟುಂಬ ಮುಂದೆ ಇಟಲಿಗೆ ಹಿಂದಿರುಗದೆ, ಮೊದಲೇ ಹಮ್ಮಿಕೊಂಡಿದ್ದಂತೆ ಅಮೆರಿಕಕ್ಕೆ ವಲಸೆ ಹೋಯಿತು.

	ಜರ್ಮನಿಯ ಭೌತವಿಜ್ಞಾನಿಗಳಾದ ಆಟೋಹಾನ್ ಮತ್ತಿತರರು ಫರ್ಮಿ ತೊಡಗಿದ ಪ್ರಯೋಗಗಳನ್ನು 1938ರಲ್ಲಿ ನಡೆಸುತ್ತಿದ್ದ ವೇಳೆ 235U ಎಂಬ ಯುರೇನಿಯಮ್ ಸಮಸ್ಥಾನಿಯ ಮೇಲೆ ಮಂದಗತಿಯ ನ್ಯೂಟ್ರಾನುಗಳನ್ನು ಹಾಯಿಸಿದಾಗ ಪರಮಾಣುವಿದಳನೆಯನ್ನು ಶೋಧಿಸಿದರು. ಈ ಕ್ರಿಯೆಯಲ್ಲಿ ಅಧಿಕಮೊತ್ತದ ಶಕ್ತಿ ಬಿಡುಗಡೆಯಾಗುವುದೆಂದೂ ಗೊತ್ತಾಯಿತು. ಈ ಕ್ರಿಯೆಯನ್ನು ಒಂದು ಸರಪಳಿ ತೆರನಾದ ಪ್ರತಿಕ್ರಿಯೆಯಾಗಿ (ಶೃಂಖಲಾಪ್ರತಿಕ್ರಿಯೆ) ಮಾರ್ಪಡಿಸಬಹುದೆಂದೂ ಇಂಥ ಯೋಜನೆಯಿಂದ ಅಸದೃಶವಾದ ನಾಶಕಾರಕ ಶಕ್ತಿಯುಳ್ಳ ಪರಮಾಣುಬಾಂಬುಗಳನ್ನು ತಯಾರಿಸಲಾದೀತೆಂದೂ ಫರ್ಮಿ ಮತ್ತು ಬೋರ್ ಮನಗಂಡರು. ಇದನ್ನೇನಾದರೂ ಜರ್ಮನಿಯ ವಿಜ್ಞಾನಿಗಳು ಮೊದಲು ಸಾಧಿಸಿದರೆ ಆಗಬಹುದಾದ ಅನಾಹುತ ತಪ್ಪಿಸಲು ಫರ್ಮಿ ಮತ್ತು ಅತನ ಕೆಲವು ಸಹೋದ್ಯೋಗಿಗಳು ಆಲ್ಬರ್ಟ್ ಐನ್‍ಸ್ಟೈನರನ್ನು ಭೇಟಿ ಮಾಡಿ ಇವರು ಅಮೆರಿಕದ ಅಧ್ಯಕ್ಷರಿಗೆ ಈ ವಿಷಯದ ಬಗ್ಗೆ ಒಂದು ಪತ್ರ ಬರೆಯುವಂತೆ ಪುಸಲಾಯಿಸಿದರು (1939). ಆ ವರ್ಷದ ಆಗಸ್ಟ್ 11ರಂದು ಅವರು ಬರೆದ ಪತ್ರದ ಪರಿಣಾಮವಾಗಿ ಪರಮಾಣುಬಾಂಬನ್ನು ತಯಾರಿಸಲು ಅಮೆರಿಕ ಸರ್ಕಾರ, 1942ರಲ್ಲಿ ಮ್ಯಾನ್‍ಹ್ಯಾಟನ್ ಯೋಜನೆ ಎಂಬ ಬೃಹದ್ಯೋಜನೆಯನ್ನು ಪ್ರವರ್ತಿಸಿತು. ಇದರ ನಿರ್ವಹಣೆಯಲ್ಲಿ ಫರ್ಮಿಗೆ ಅತಿ ಮುಖ್ಯವಾದ ಪಾತ್ರವಿತ್ತು. ಮೊತ್ತಮೊದಲನೆಯ ನಿಯಂತ್ರಿತ ನ್ಯೂಕ್ಲಿಯರ್ ರಿಯಾಕ್ಟರನ್ನು 1942ರ ಕೊನೆಯ ಭಾಗದಲ್ಲಿ ಸ್ಥಾಪಿಸಿ 1945ರ ಮಧ್ಯಭಾಗದಲ್ಲಿ ಮೊದಲನೆಯ ಪರಮಾಣುಬಾಂಬನ್ನು ಆಸ್ಫೋಟಿಸಲಾಯಿತು.

	ನ್ಯೂಕ್ಲಿಯರ್ ಕ್ರಿಯೆಯ ಆಕರದಿಂದ ಬರುವ ನ್ಯೂಟ್ರಾನುಗಳನ್ನು ಉಪಯೋಗಿಸಿಕೊಂಡು ಫರ್ಮಿ, ವಸ್ತುಗಳ ಮೂಲಕ ನ್ಯೂಟ್ರಾನುಗಳ ವಿವರ್ತನ (ಡಿಫ್ಯಾಕ್ಷನ್), ಧ್ರುವೀಕರಣ, ಚದರಿಕೆ ಮುಂತಾದ ಅನೇಕ ಪ್ರಯೋಗಗಳನ್ನು ನಡೆಸಿದ.

	1946ರಲ್ಲಿ ಈತ ಶಿಕಾಗೋ ವಿಶ್ವವಿದ್ಯಾಲಯದ ಪರಮಾಣು ಸಂಶೋಧನೆಯ ವಿಭಾಗದಲ್ಲಿ ಘನತೆ ಪಡೆದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಮುಂದೆ ಪ್ರಸಿದ್ಧಿಗಳಿಸಿದ ಅನೇಕ ಯುವ ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾಲಯಲ್ಲಿ ತರಬೇತಿ ನೀಡಿದ. ಶಿಕಾಗೋದಲ್ಲಿ ಮೆಸಾನುಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿದವನೇ ಫರ್ಮಿ. ಅಲ್ಲಿ ಕಟ್ಟಲಾಗುತ್ತಿದ್ದ ಸಿಂಕ್ರೊಟ್ರಾನ್ ಎಂಬ ಭಾರಿ ವೈಜ್ಞಾನಿಕ ಉಪಕರಣದ ಬಗ್ಗೆ ಸಲಹೆಗಾರನಾಗಿದ್ದ.

	ಫರ್ಮಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಸಂಸತ್ತಿನ ಪ್ರತಿಭೆಯ ಪದಕವನ್ನು ಕೊಡಲಾಯಿತು. 1950ರಲ್ಲಿ ಈತ ಲಂಡನ್ನಿನ ರಾಯಲ್ ಸೊಸೈಟಿಯ ವಿದೇಶೀ ಸದಸ್ಯನಾಗಿ ಚುನಾಯಿತನಾದ.

	ಏಡಿಗಂತಿ ರೋಗದಿಂದ ಈತ 1954ರ ನವಂಬರ್ 28ರಂದು ನಿಧನ ಹೊಂದಿದ. ಪರಮಾಣು ಸಂಶೋಧನೆಯಲ್ಲಿ ಅನೇಕ ವಿಧವಾಗಿ ಕೊಡುಗೆಯನ್ನು ನೀಡಿದ್ದ ಈತನ ಸ್ಮರಣಾರ್ಥವಾಗಿ ನೂರನೆಯ (ಕೃತಕ) ಧಾತುವನ್ನು ಫರ್ಮಿಯಮ್ ಎಂದು ಹೆಸರಿಸಲಾಗಿದೆ. ಅಲ್ಲದೇ ಫರ್ಮಿ-ಡಿರಾಕ್ ಸಂಖ್ಯಾಕಲನವಿಜ್ಞಾನದ ನಿಯಮಗಳಿಗೆ ಒಳಪಡುವ ಅರ್ಧಪೂರ್ಣಾಂಕದ ಗಿರಕಿ ಇರುವ ಕಣಗಳನ್ನು ಫರ್ಮಿಯಾನುಗಳು ಎಂದು ಹೆಸರಿಸಲಾಗಿದೆ.	
(ಎಸ್.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ